ಶಿಕ್ಷೆ

	ಅಪರಾಧ ಮಾಡಿದ ವ್ಯಕ್ತಿ ಅಥವಾ ಗುಂಪಿಗೆ ಆ ಕಾರಣಕ್ಕಾಗಿ ರಾಜ್ಯ ವಿಧಿಸುವ ದಂಡ. ವ್ಯಾಪಕಾರ್ಥದಲ್ಲಿ ಹೇಳುವುದಾದರೆ ಅದು ಯಾವುದೇ ಒಬ್ಬ ವ್ಯಕ್ತಿ ದುರುದ್ದೇಶದಿಂದ ಅಥವಾ ಕೆಡುಕಿನ ಅರಿವಿನಿಂದ ಮಾಡಿದ ದುಷ್ಕøತ್ಯಕ್ಕಾಗಿ ಅವನಿಗೆ ಸಮಾಜ, ರಾಜ್ಯ ಅಥವಾ ಸಂತ್ರಸ್ತ ವ್ಯಕ್ತಿ ಉದ್ದೇಶಪೂರ್ವಕವಾಗಿ ಎಸಗುವ ಹಾನಿ ಅಥವಾ ಅಸಂತೋಷಕರ ಪ್ರತಿಕ್ರಿಯೆಯನ್ನು ಒಳಗೊಳ್ಳುತ್ತದೆ. ಕಾನೂನು ಉಲ್ಲಂಘನೆಯನ್ನು ಖಂಡಿಸುವ ಮತ್ತು ಶಿಸ್ತಿನ ಸಂದೇಶವನ್ನು ಮುಟ್ಟಿಸುವ ಕೆಲಸವನ್ನು ಶಿಕ್ಷೆ ಮಾಡುತ್ತದೆ. ದಂಡ ತೆರುವಿಕೆ, ಸೆರೆಮನೆ ವಾಸ, ದೈಹಿಕ ಹಿಂಸೆ, ಅವಮಾನ ಮತ್ತು ಮರಣ ದಂಡನೆ-ಇವು ಶಿಕ್ಷೆಯ ವಿವಿಧ ಪ್ರಕಾರಗಳು. ಶಿಕ್ಷೆ ಅನುಭವಿಸುವಾಗ ಹೊಂದುವ ಸ್ವಾತಂತ್ರ್ಯಹರಣ, ಧನಹಾನಿ, ಅವಮಾನ ಮತ್ತು ನೋವುಗಳ ಅಡಿಯಲ್ಲಿ ಅಪರಾಧಿ ಪ್ರಾಯಶ್ಚಿತ್ತ ಮಾಡಿಕೊಳ್ಳುವಂತೆ ಸಮಾಜ ಕೂಡ ಶಿಕ್ಷೆ ವಿಧುಸುವುದರ ಮೂಲಕ ತಾನು ನಂಬಿದ ಮೌಲ್ಯಗಳನ್ನು ಎತ್ತಿ ಹಿಡಿದು ದುಷ್ಪ್ರವೃತ್ತಿಗೆ ಕಡಿವಾಣ ಹಾಕುತ್ತದೆ. ಕೆಲವು ಸಂದರ್ಭಗಳಲ್ಲಿ ಸಂತ್ರಸ್ತ ವ್ಯಕ್ತಿಗೆ ಧನ ಪರಿಹಾರವೂ ಸಿಗುತ್ತದೆ. ಹೀಗೆ ಶಿಕ್ಷೆ ಎಲ್ಲರಿಗೂ ತಕ್ಕದಾದ್ದನ್ನೇ ವಿತರಿಸುತ್ತದೆ. ಶಿಕ್ಷೆ ವಿಧಿಸುವ ಮೊದಲು ಕೈಗೊಳ್ಳಬೇಕಾದ ಕಾನೂನಿನ ಪ್ರಕ್ರಿಯೆ ನ್ಯಾಯಯುತವಾಗಿರಬೇಕು ಹಾಗೂ ಶಿಕ್ಷೆ ಪ್ರಮಾಣ ಅಪರಾಧದ ಪ್ರಮಾಣಕ್ಕೆ ಸಾಪೇಕ್ಷವಾಗಿರಬೇಕು. ಆದ್ದರಿಂದಲೇ ಶಿಕ್ಷೆಗೆ ಮಹತ್ತ್ವ ಪೂರ್ಣ ನ್ಯಾಯದಾನದ ಆಯಾಮವಿದೆ. ಆದರೆ ವಸಾಹತುಶಾಹಿ ಅಥವಾ ಶೋಷಣಾತ್ಮಕ ಕಾನೂನು ಪದ್ಧತಿಗಳಲ್ಲಿ ಕಾನೂನೇ ದಮನಕಾರೀ ಅಥವಾ ಅನ್ಯಾಯಯುತ ಧೋರಣೆಯನ್ನು ಹೊಂದಿದಾಗ, ಶಿಕ್ಷೆ ನ್ಯಾಯವನ್ನು ಪ್ರತಿಪಾದಿಸುತ್ತದೆಯೇ ಎನ್ನುವುದು ಸಂದೇಹಾಸ್ಪದ.

	ಶಿಕ್ಷೆಗೆ ಸಾಮುದಾಯಿಕ ಆಶಯ ಪೂರೈಸುವ, ಸಾಮಾಜಿಕ ಸುಧಾರಣೆ ತರುವ, ಅಪರಾಧಿಯನ್ನು ಚಿಕಿತ್ಸೆಗೊಳಿಸಿ ಉತ್ತಮ ಪ್ರಜೆಯನ್ನಾಗಿಸುವ, ಶಾಂತಿಸ್ಥಾಪನೆ ಮತ್ತು ಮನಶ್ಶಾಸ್ತ್ರೀಯ ದೃಷ್ಟಿಕೋನಗಳೂ ಇವೆ. ದಂಡಿತನಿಗೂ ದಂಡನಾಕಾರನಿಗೂ ಇರುವ ಮಾನಸಿಕ ಕ್ಲೇಶದ ಪರಿಹಾರ ಮತ್ತು ದಂಡನೆ ಭೀತಿ ಸಾಮಾಜಿಕ ಪರಿಣಾಮ ಹಾಗೂ ಮನಶ್ಶಾಸ್ತ್ರೀಯ ಅಂಶಗಳನ್ನು ಸೂಚಿಸುತ್ತವೆ. ಶಿಕ್ಷೆಗಳು ಕ್ರೂರ ಮತ್ತು ಅಮಾನವೀಯ ವಾಗಿರಬಾರದೆಂಬ ಮಾನವ ಹಕ್ಕುಗಳ ಆಶಯ ಮತ್ತು ಅಪರಾಧ ಶಾಸ್ತ್ರದ ತತ್ತ್ವಗಳು ದೇಶೀ ನ್ಯಾಯಪದ್ಧತಿಗಳ ಮೇಲೆ ಆಧುನಿಕ ಕಾಲದಲ್ಲಿ ಅಗಾಧ ಪ್ರಭಾವ ಬೀರಿವೆ.

	ಶಿಕ್ಷೆಯ ಉದ್ದೇಶ: ಶಿಕ್ಷಾಪದ್ಧತಿ ಮುಖ್ಯವಾದ ಮೂರು ಉದ್ದೇಶಗಳನ್ನು ಹೊಂದಿದೆ; ನಿವಾರಣೆ, ಸುಧಾರಣೆ ಮತ್ತು ಪ್ರತೀಕಾರ. ನಿವಾರಣಾತ್ಮಕ ಉದ್ದೇಶ ಶಿಕ್ಷೆಯ ಪರಿಣಾಮದಲ್ಲಿ ಬಿಂಬಿತವಾಗುತ್ತದೆ. ಶಿಕ್ಷೆ ಅಪರಾಧಿಯ ಮತ್ತು ಸಂಭಾವ್ಯ ಅಪರಾಧಿಯ ಮನೋವೃತ್ತಿಯ ಮೇಲೆ ಕಾರ್ಯವೆಸಗಿ ಅಪರಾಧೀಪ್ರವೃತ್ತಿಯನ್ನು ತಡೆಯುತ್ತದೆ. ತನ್ಮೂಲಕ ಸಮಾಜ ರಕ್ಷಣೆಯನ್ನು ಮಾಡುತ್ತದೆ. ಬಂಧಿತನು ಸಮಾಜ ಘಾತುಕ ಕಾರ್ಯವೆಸಗಲಾರ; ಶಿಕ್ಷೆಯಿಂದ ಅಂಗವಿಹೀನನಾದವ ಪುನಃ ಅದೇ ಕೆಲಸ ಮಾಡಲಾರ; ಮರಣದಂಡನೆ ಅಪರಾಧಿಯನ್ನು ಶಾಶ್ವತವಾಗಿ ನಿರ್ಮೂಲನಗೊಳಿಸುತ್ತದೆ. ಒಳಿತು ಕೆಡುಕುಗಳನ್ನು ತುಲನೆಮಾಡಿಕೊಂಡು ಕಾರ್ಯವೆಸಗುವ ಪ್ರತಿಯೊಬ್ಬ ಮನುಷ್ಯನೂ ಶಿಕ್ಷೆಯ ಭೀತಿಯಿಂದಾಗಿ ದುಷ್ಕøತ್ಯಗಳಿಂದ ದೂರವಿರುತ್ತಾನೆ (ಜೆಂಮಿ ಬೆಂಥಾಮ್). ಶಿಕ್ಷೆ ಅಪರಾಧಿ ಎದುರಿಸುವ ಕೆಟ್ಟ ಪಣ (ಜಾನ್ ಲಾಕ್). ಅದು ಅಪರಾಧ ಉಗಮದ ಒರತೆಯನ್ನು ನಿದ್ರ್ರವಗೊಳಿಸುವ ಪರಿಣಾಮಕಾರಿ ನಿರುತ್ತೇಜಕ.

	ಮಾನಸಿಕ ಅಸಮತೋಲನದಿಂದ ಅಪರಾಧ ಹೊರಹೊಮ್ಮುವುದಾದ್ದ ರಿಂದ ಶಿಕ್ಷಾ ಪದ್ಧತಿ ಅಪರಾಧಿಯನ್ನು ಸ್ವಸ್ಥಚಿತ್ತನನ್ನಾಗಿಸಬೇಕೆಂದು ಸುಧಾರಣಾವಾದಿಗಳು ಹೇಳುತ್ತಾರೆ. ಇಪ್ಪತ್ತನೆಯ ಶತಮಾನದಲ್ಲಿ ಜನಪ್ರಿಯವಾದ ಈ ಸಿದ್ಧಾಂತದ ಪ್ರಕಾರ ಅಪರಾಧಿಯನ್ನು ಕೊಲ್ಲುವುದು ತರವಲ್ಲ; ಅಪರಾಧದ ಕಾಯಿಲೆಗೆ ಚಿಕಿತ್ಸೆಕೊಡಬೇಕು. ಜೈಲುಗಳು ಆಸ್ಪತ್ರೆಗಳಾಗಿರಬೇಕು, ಪ್ರಶಿಕ್ಷಣದ ಕೇಂದ್ರಗಳಾಗಬೇಕು. ಹಿಂಸೆಯ ಬದಲು ಹೃದ್ಯ ಆರೈಕೆಯಿಂದಾಗಿ ಅಪರಾಧಿ ಯೋಗ್ಯ ಪ್ರಜೆಯಾಗುತ್ತಾನೆ. ಅಪರಾಧಿಯನ್ನು ಪುನರ್ವಸತಿಗೊಳಿಸುವುದು, ಒಳ್ಳೆಯ ನಡವಳಿಕೆ ಮೇಲೆ ಬಿಡುಗಡೆಗೊಳಿಸುವುದು ಮತ್ತು ಒಳ್ಳೆಯ ಬದುಕಿನ ಕೌಶಲ್ಯಗ ಳನ್ನು ಕಲಿಸುವುದು ಸುಧಾರಣ ಕ್ರಮಗಳು.

	ಪ್ರತೀಕಾರವಾದಿಗಳು ಶಿಕ್ಷೆಯನ್ನು ಸುಧಾರಣ ಸಾಧನವೆನ್ನುವುದರ ಬದಲು ಅದೇ ಅಂತಿಮ ಉದ್ದೇಶವೆಂದು ಹೇಳುತ್ತಾರೆ. ಕೆಡುಕಿಗೆ ಕೆಡುಕೇ ಉತ್ತರ; ಕಣ್ಣಿಗೆ ಕಣ್ಣು; ಹಲ್ಲಿಗೆ ಹಲ್ಲು ಎಂಬ ಸೇಡಿನ ಧೋರಣೆ ಇದರ ಒಳತಿರುಳು. ತಪ್ಪೆಸಗಿದಾಗ ಆದ ಅಸಮತೋಲನವನ್ನು ಇನ್ನೊಂದು ಅಸಮತೋಲನದಿಂದ ಸರಿಪಡಿಸಬೇಕು. ಅಪರಾಧಕ್ಕೆ ಶಿಕ್ಷೆ ಕೊಡಿಸಿದಾಗ ನಿಷ್ಕಳಂಕತೆ ಬರುತ್ತದೆ ಎಂಬುದು ಇವರ ನಿಲುವು. ಅಪರಾಧದಿಂದ ಘಾಸಿಗೊಂಡ ಸಮಾಜ ಸಂತ್ರಸ್ತನೊಂದಿಗೆ ಸಹಾನುಭೂತಿ ತಾಳಿ ಅವನ ಸೇಡಿನ ಕಿಚ್ಚನ್ನು ತಾನೇ ವಹಿಸಿಕೊಂಡು ದುಷ್ಕøತ್ಯ ಖಂಡಿಸುವ ಮತ್ತು ಅಪರಾಧಿಯಿಂದ ಅಪರಾಧದ ಸಂತೋಷವನ್ನು ಕಿತ್ತುಕೊಂಡು ನೈಸರ್ಗಿಕ ನ್ಯಾಯ ಹಾಗೂ ದೈವೀ ಸಂತೋಷವನ್ನು ಸ್ಥಾಪಿಸುವ ಕ್ರಿಯೆ ಪ್ರತೀಕಾರಾತ್ಮಕ ನಿಲುವಿನಲ್ಲಿದೆ.
ಶಿಕ್ಷೆಯ ಹಿಂದಿರುವ ಉದ್ದೇಶಗಳೊಳಗೆ ಪರಸ್ಪರ ವೈರುದ್ಧ್ಯವಿದ್ದರೂ ಪ್ರತಿಯೊಂದರ ಹಿಂದೆ ಸ್ವೀಕಾರಾರ್ಹ ಅಂಶವಿದೆಯೆಂಬುದನ್ನು ಗಮನಿಸಬೇಕು ಈ ಉದ್ದೇಶಗಳೊಳಗೆ ಯಾವ ರೀತಿಯ ಹೊಂದಾಣಿಕೆ ಮಾಡಿಕೊಂಡು ಶಿಕ್ಷಾ ಪದ್ಧತಿಯನ್ನು ರಚಿಸಬೇಕೆಂಬುದು ಆಯಾ ಸಮಾಜಕ್ಕೆ ಬಿಟ್ಟವಿಚಾರ.

	ಸೈದ್ಧಾಂತಿಕ ನಿಲುವುಗಳು: ಎಮಿಲಿ ಡ್ಯೂಕಕೇಮ್ ಶಿಕ್ಷೆಯನ್ನು ಸಾಮಾಜಿಕ ಐಕ್ಯಮತ್ಯ ಮತ್ತು ಸಾಮುದಾಯಿಕ ಸಾಕ್ಷೀಪ್ರಜ್ಞೆಗಳಿಗೆ ಸವಾಲೆಸೆದ ಕೃತ್ಯಕ್ಕೆ ಸಮಾಜ ಪ್ರತಿಕ್ರಿಯಿಸುತ್ತ ಸಾಮಾಜಿಕ ಮೌಲ್ಯಗಳ ಪುನಃಸ್ಥಿರೀಕರಣಕ್ಕೆ ನಿರ್ಮಿಸಿಕೊಂಡ ಸಾಧನವೆಂದು ವ್ಯಾಖ್ಯಾನಿಸುತ್ತಾನೆ. ಮಾನವ ಜೀವನ ಕುರಿತು ಸಮಾಜ ಇಟ್ಟುಕೊಂಡ ನಂಬಿಕೆ, ಗೌರವಗಳು ಕೊಲೆಗಾರನಿಗೆ ನೀಡುವ ಶಿಕ್ಷೆಯ ಮೂಲಕ ಪುನಶ್ಚೇತನಗೊಳ್ಳುತ್ತವೆ ಎಂದು ಈತ ಹೇಳುತ್ತಾನೆ (1893). ಓಪನ್ ಹೀಮರ್ (1913) ರಾಜ್ಯ ಕುಟುಂಬದ ಯಜಮಾನನ ಪಾತ್ರವನ್ನು ವಹಿಸುತ್ತಾ ಸಮಾಜದಲ್ಲಿ ಶಿಸ್ತು ತರಲು, ದೈವಿಕೋಪ ನಿವಾರಣೆಯ ಧಾರ್ಮಿಕ ಕರ್ತವ್ಯ ಮಾಡಲು ಮತ್ತು ದುಷ್ಕøತ್ಯಕ್ಕೆ ತಾತ್ತ್ವಿಕ ಅಂತ್ಯ ತರಲು ನಿರ್ಮಿಸಿದ ಉಪಕರಣವೇ ಶಿಕ್ಷೆ ಎಂದು ಹೇಳುತ್ತಾನೆ. ಮಾಕ್ರ್ಸಿಸ್ಟ್ ಚಿಂತಕರ ಅಭಿಪ್ರಾಯದಲ್ಲಿ ಶಿಕ್ಷೆ ವರ್ಗಬೇಧ ನೀತಿಯ ಉತ್ಪತ್ತಿ; ಮೇಲ್ವರ್ಗದವರು ಕೆಳವರ್ಗದವರ ಮೇಲೆ ಹಿಡಿತ ಸಾಧಿಸುವ ಸಾಧನ. ಅಪರಾಧದ ಕುರಿತಾಗಿ ಸಮಾಜದ ಪ್ರತಿಕ್ರಿಯೆ ಕಾರ್ಮಿಕನ ಮಾರುಕಟ್ಟೆಯ ಸ್ಥಿತಿಯನ್ನು ಅವಲಂಬಿಸಿದೆ ಎನ್ನುತ್ತಾ ಈ ನಿಲುವಿಗೆ ಸೆರಮನೆಯಲ್ಲಿರುವ ಜೀತದಾಳು ಪದ್ಧತಿ, ವಸಾಹತುವಾದಕ್ಕೆ ಬೆಂಬಲ ಕೊಡುವ ಗಡಿಪಾರು ಶಿಕ್ಷೆಯನ್ನು ಉದಾಹರಿಸುತ್ತಾನೆ. ಫ್ರಾಯ್ಡ್ ಅನುಯಾಯಿಗಳ ದೃಷ್ಟಿಯಲ್ಲಿ ಶಿಕ್ಷೆ ಕಾಮುಕ ಅಭಿಲಾಷೆಗಳ ಬಗ್ಗೆ ಹತಾಶೆಯನ್ನು ಅನುಭವಿಸಿದ ವ್ಯಕ್ತಿಯ ಕೃತ್ಯಕ್ಕೆ ವ್ಯಕ್ತಿತ್ವ ಪುನಃ ನಿರ್ಮಾಣದ ಉದ್ದೇಶದಿಂದ ಸಮಾಜ ನೀಡುವ ಪ್ರತಿಕ್ರಿಯೆ. ನೆದರ್ಲೆಂಡ್ ಮತ್ತಿತರ ಸಮಾಜಶಾಸ್ತ್ರಜ್ಞರ ಪ್ರಕಾರ ಆಳುವ ವರ್ಗ ಕೆಳವರ್ಗದಿಂದ ಸಾಮಾಜಿಕವಾಗಿ ದೂರವಿದ್ದಾಗ ಕೆಳವರ್ಗದವರ ಮೇಲೆ ವಿಧಿಸುವ ಶಿಕ್ಷೆಗಳು ಹೆಚ್ಚಾಗಿ ಕ್ರೂರ ಮತ್ತು ಅಮಾನುಷವಾಗಿ ದ್ದವು; ಆದರೆ ಪ್ರಜಾಪ್ರಭುತ್ವ ಹಾಗೂ ಸಮಾನತೆಯ ಆದರ್ಶಗಳು ರಾಜಕೀಯ ಅಧಿಕಾರದ ತಳಮಟ್ಟವನ್ನು ವಿಶಾಲಗೊಳಿಸಿದಾಗ ದಂಡನಾಕಾರ ಮತ್ತು ದಂಡಿತನೊಳಗಿನ ಸಾಮಾಜಿಕ ಅಂತರ ಕಡಿಮೆಯಾಗಿ ಶಿಕ್ಷೆಗಳು ಮೆದುವಾದವು. ಸೆಸಾರೆ ಲೋಂಟ್ರೊಕೊ ಅನ್ನುವಂತೆ ಅಪರಾಧ ಸುಂಟರಗಾಳಿಯಂತೆ ಬಾಹ್ಯ ಅಂಶಗಳ ಒತ್ತಡದಿಂದ ಉದ್ಭವಿಸುವುದರಿಂದ ಸೇಡಿನ ಪ್ರತಿರೂಪವಾಗಿ ಮಾತ್ರ ಶಿಕ್ಷೆ ಕೆಲಸಮಾಡುತ್ತದೆಯೇ ಹೊರತು ಮನುಷ್ಯವರ್ತನೆಯನ್ನು ರೂಪಿಸುವ ಸಾಧನೆಯಾಗುವುದಿಲ್ಲ. ಮೇಲಿನ ಸಿದ್ಧಾಂತಗಳ ಪ್ರಕಾರ ಶಿಕ್ಷೆಯ ನೀತಿಗಳಿಗೂ ಸಾಮಾಜಿಕ ವಿನ್ಯಾಸ ಹಾಗೂ ರಚನೆಗೆ ಹತ್ತಿರದ ಸಂಬಂಧವಿದೆ.

	ಐತಿಹಾಸಿಕ ಬೆಳೆವಣಿಗೆ: ಪ್ರಪಂಚದ ವಿವಿಧ ನಾಗರಿಕತೆಗಳಲ್ಲಿ ಶಿಕ್ಷಾಪದ್ಧತಿಯ ನೀತಿ ರೀತಿಗಳು ದೇಶೀ ಸಾಂಸ್ಕøತಿಕ ಮಟ್ಟ ಮತ್ತು ಮಾನವ ಹಕ್ಕುಗಳ ಪ್ರಜ್ಞೆಯ ವೃದ್ಧಿಯೊಂದಿಗೆ ಬೆಳೆದು ಬಂದದ್ದನ್ನು ಕಾಣಬಹುದು. ಪ್ರಾಚೀನ ಪದ್ಧತಿಗಳಲ್ಲಿ ಅಪರಾಧವನ್ನು ವೈಯಕ್ತಿಕ ಅಪಕೃತ್ಯವೆಂದು ಭಾವಿಸಿ ವ್ಯಕ್ತಿತಃ ಪರಿಹರಿಸುವ ಪದ್ಧತಿಯಿದ್ದುದು ಮುಂದೆ ಸಮಾಜವೇ ಅಪರಾಧದ ನಿವಾರಣೆ, ಸುಧಾರಣೆ ಮತ್ತು ಪ್ರತೀಕಾರದ ಜವಾಬ್ದಾರಿಯನ್ನು ಹೊತ್ತದ್ದು ಶಿಕ್ಷಾಪದ್ಧತಿಯ ಸ್ಥಾಪನೆ ಮತ್ತು ಬೆಳೆವಣಿಗೆಗೆ ಕಾರಣವಾಯಿತು.

ಕ್ರಿ.ಪೂ. 22ನೆಯ ಶತಮಾನದಲ್ಲಿ ಬ್ಯಾಬಿಲೋನಿಯ ದೊರೆ ಹಮೂರಬಿ ಪ್ರಸಿದ್ಧ ಕಾನೂನು ಸಂಹಿತೆಯೊಂದನ್ನು ರೂಪಿಸಿದ. ಈ ಸಂಹಿತೆಯಲ್ಲಿ ಅಪರಾಧದ ಪ್ರಮಾಣಕ್ಕೆ ಸಮನಾದ ಶಿಕ್ಷೆ ವಿಧಿಸಲು ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಎಂಬ ಪ್ರತೀಕಾರಾತ್ಮಕ ತತ್ತ್ವ ಅಳವಡಿಸಲಾಗಿದೆ. ಗ್ರೀಕ್ ಮತ್ತು ರೋಮನ್ ಕಾನೂನು ಪದ್ಧತಿ ಆರಂಭದಲ್ಲಿ ರಾಜ್ಯದ ವಿರುದ್ಧವೆಸಗಿದ ಅಪರಾಧಗಳಿಗೆ ಮಾತ್ರ ಶಿಕ್ಷೆ ವಿಧಿಸಿದ್ದವು. ಇತರ ಸಂದರ್ಭಗಳಲ್ಲಿ ಸಂತ್ರಸ್ತನಿಗೆ ಅಪರಾಧಿಯಿಂದ ಪರಿಹಾರವನ್ನು ಕೊಡಿಸಲಾಗುತ್ತಿತ್ತು. ರೋಮಿನ ಜಸ್ಟೀನಿಯನ್ನನ ಪ್ರಕಾರ ಶಿಕ್ಷೆ ವಿಧಿಸುವ ಪರಮಾಧಿಕಾರ ರಾಜನಿಗೆ ಮಾತ್ರ ಇತ್ತು.

	ಪ್ರಾಚೀನ ಭಾರತೀಯ ನ್ಯಾಯ ಪದ್ಧತಿಯಲ್ಲಿ ಪಾತಕದ ಕುರಿತಾಗಿದ್ದ ವೈಯಕ್ತಿಕ ಪ್ರಾಯಶ್ಚಿತ್ತದ ಧಾರ್ಮಿಕ ಪರಿಕಲ್ಪನೆಯಿಂದ ಶಿಕ್ಷೆ ಉಗಮವಾಯಿತು. ಸ್ಮøತಿಕಾರರು ಪೂರ್ಣಪ್ರಮಾಣದ ಶಿಕ್ಷಾವಿಜ್ಞಾನವನ್ನು ವೃದ್ಧಿಗೊಳಿಸಲಿಲ್ಲವಾದರೂ ಅವರಿಗೆ ಶಿಕ್ಷೆಗಳ ಉದ್ದೇಶಗಳ ಬಗೆಗೆ ಸರಿಯಾದ ಅರಿವಿತ್ತು. ಸಂತ್ರಸ್ತ ವ್ಯಕ್ತಿಯು ವೈಯಕ್ತಿಕ ಸೇಡನ್ನು ಕೈಗೊಳ್ಳದಂತೆ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲಿಕ್ಕಾಗಿ ಅಪರಾಧಿಗೆ ಯೋಗ್ಯ ಶಿಕ್ಷೆಯನ್ನು ವಿಧಿಸಬೇಕು (ಯಾಜ್ಞವಲ್ಕ್ಯ II 16, ನಾರದ I 46) ಶಿಕ್ಷೆಯ ಭಯ ಅಪರಾಧದ ಒಲವನ್ನು ದೂರಗೊಳಿಸುತ್ತದೆ (ಶಾಂತಿಪರ್ವ) ಶಿಕ್ಷೆ ಅನುಭವಿಸುವುದರಿಂದ ಅಪರಾಧಿ ಶುದ್ಧೀಕರಿಸಲ್ಪಟ್ಟು ಯೋಗ್ಯ ಪ್ರಜೆಯಾಗುತ್ತಾನೆ (ಮನುಸ್ಮøತಿ). ನಿಜವಾದ ಅರ್ಥದಲ್ಲಿ ಶಿಕ್ಷೆಯೇ ರಾಜ; ಶಿಸ್ತಿನ ಹರಿಕಾರ; ವ್ಯವಹಾರಗಳ ವ್ಯವಸ್ಥಾಪಕ; ಎಚ್ಚರದಲ್ಲೂ ನಿದ್ರೆಯಲ್ಲೂ ಎಲ್ಲರನ್ನೂ ಪಾಲಿಸುವ ರಕ್ಷಕ ಮತ್ತು ಮನುಷ್ಯ ವರ್ತನೆಯ ಸುಧಾರಕ (ಮನುಸ್ಮøತಿ). ಶಿಕ್ಷೆ ಯುಕ್ತವಾದ ಧರ್ಮ, ಅರ್ಥ ಮತ್ತು ಕಾಮಗಳನ್ನು ರಕ್ಷಿಸುವುದರಿಂದ ಅದು ತ್ರಿವರ್ಗ ರೂಪಿಯಾಗಿದೆ (ಮಹಾಭಾರತ). ಆದರೆ ಶಿಕ್ಷಿಸುವ ಅಧಿಕಾರ ರಾಜನಿಗಷ್ಟೇ ಸೀಮಿತ.

ಪ್ರಾಚೀನ ನ್ಯಾಯಶಾಸ್ತ್ರಜ್ಞರು ಶಿಕ್ಷೆಯನ್ನು 4 ತೆರವಾಗಿ ವಿಂಗಡಿಸಿದ್ದಾರೆ; ವಾಗ್ದಂಡ (ಎಚ್ಚರಿಕೆ), ದಿಗ್‍ದಂಡ (ತೀವ್ರ ಅಸಮಾಧಾನ), ದಂಡಾದಂಡ (ದಂಡ ಶುಲ್ಕ ವಿಧಿಸುವುದು) ಮತ್ತು ವಧಾದಂಡ. ವಧಾದಂಡ 3 ಬಗೆಯದು: ಪೀಡನ, ಅಂಗಚ್ಛೇದ ಮತ್ತು ಪ್ರಮಾಪನ (ಮರಣ). ಪೀಡನ 4 ರೀತಿಯದು: ತಾಡನ (ಚಾಟಿಯೇಟು), ಅವರೋಧನ (ಸೆರೆಮೆನೆ ವಾಸ), ಬಂಧನ (ಕೈಕಾಲುಗಳನ್ನು ಕಟ್ಟುವುದು) ಮತ್ತು ವಿಡಂಬನ (ತಲೆ ಬೋಳಿಸುವುದು ಇತ್ಯಾದಿ ಅವಹೇಳನ). ಅಂಗಚ್ಛೇದನ ಮತ್ತು ದಂಡಶುಲ್ಕ ಶಿಕ್ಷೆಯನ್ನು ಅಪರಾಧದ ಪ್ರಮಾಣಾನುಸಾರ ನೀಡುವಂತೆ ಹೇಳಲಾಗಿದೆ. ಮನುಸ್ಮøತಿ ಮತ್ತು ಸೂತ್ರಕಾಲದಲ್ಲಿ ದೈಹಿಕ ಹಿಂಸೆ, ಅಂಗಚ್ಛೇದ ಶಿಕ್ಷೆಗಳು ಚಾಲ್ತಿಯಲ್ಲಿದ್ದುದನ್ನು ಮೆಗಸ್ತನೀಸ್ ದಾಖಲಿಸಿದ್ದಾನೆ (ಕ್ರಿ.ಪೂ. 3ನೆಯ ಶತಮಾನ). ಮುಂದೆ ಯಾಜ್ಞವಲ್ಕ್ಯ ಮತ್ತು ನಾರದ ಸ್ಮøತಿ ಕಾಲದಲ್ಲಿ ಶಿಕ್ಷಾಪದ್ಧತಿ ಮೆದುಗೊಂಡದ್ದನ್ನು ಕಾಣಬಹುದು. ಅಶೋಕನ ಶಿಲಾಶಾಸನದಲ್ಲಿ ನ್ಯಾಯಕ ಅಧಿಕಾರಿಗಳು ಸಲ್ಲದ ಕಠಿಣ ಸಜೆಯನ್ನು ವಿಧಿಸಬಾರದೆಂದು ಹೇಳಲಾಗಿದೆ. ಮೌರ್ಯರು ವ್ಯಾಪಾರಿಗಳಿಗೆ ಮರಣದಂಡನೆಯ ಬದಲು ಗಡೀಪಾರಿನ ಶಿಕ್ಷೆ ವಿಧಿಸಿದುದಕ್ಕೆ ದಾಖಲೆಯಿದೆ (ದಶಕುಮಾರ ಚರಿತ್ರೆ). ಫಾಹಿಯೆನ್ ಗುಪ್ತರ ಕಾಲದ ಸುಧಾರಿತ ಶಿಕ್ಷಾಕ್ರಮವನ್ನು ಪ್ರಶಂಸಿಸಿದ್ದಾನೆ. ಶುಕ್ರನೀತಿಸಾರ ಮತ್ತು ಕಮಂಡಕೀಯ ನೀತಿಸಾರಗಳಲ್ಲಿ ಹೇಳಲಾದಂತೆ ಅಪರಾಧಿ ರಾಜದ್ರೋಹವೆಸಗಿ ರಾಜ್ಯದ ಸುಭದ್ರತೆಗೆ ಭಂಗ ತರುವ ಕೃತ್ಯವನ್ನು ಮಾಡಿದಾಗ ಮಾತ್ರ ಮರಣದಂಡನೆಯನ್ನು ವಿಧಿಸಬೇಕೆ ಹೊರತು ಗಂಭೀರ ಅಪರಾಧಗಳ ಸಂದರ್ಭದಲ್ಲೂ ಮರಣದಂಡನೆ ವಿಧಿಸಬಾರದು. ಚೋಳರ ಆಳಿಕೆಯ ಕಾಲದಲ್ಲಿ ಹಲವಾರು ಕೊಲೆ ಪ್ರಕರಣಗಳಲ್ಲಿ ಮರಣದಂಡನೆಯ ಬದಲು ದಂಡಶುಲ್ಕ ವಿಧಿಸಿದುದಕ್ಕೆ ದಾಖಲೆಯಿದೆ.

	ರಾಜ ಶಿಕ್ಷೆ ವಿಧಿಸುವಾಗ ಅಪರಾಧಿಯ ವಯಸ್ಸು, ಲಿಂಗ, ದೈಹಿಕ ಮತ್ತು ಆರ್ಥಿಕ ಪರಿಸ್ಥಿತಿ, ಅಪರಾಧದ ಸ್ವರೂಪ, ಅಪರಾಧಕ್ಕೊಳಗಾದ ವ್ಯಕ್ತಿಯ ಸ್ಥಾನ ಅಥವಾ ಅಪಹೃತ ಸ್ವತ್ತಿನ ಮೌಲ್ಯಗಳನ್ನು ಗಣನೆಗೆ ತೆಗೆದುಕೊಂಡು ಶಿಕ್ಷೆಯನ್ನು ವಿಧಿಸಬೇಕು (ಗೌತಮ ಮತ್ತು ಮನುಸ್ಮøತಿ). ಬಾಲಾಪರಾಧಿಗಳಿಗೆ, ವೃದ್ಧರಿಗೆ, ಸ್ತ್ರೀಯರಿಗೆ ಮತ್ತು ರೋಗಿಗಳಿಗೆ ಶಿಕ್ಷೆಯ ಗಾತ್ರ ಅರ್ಧಪ್ರಮಾಣವಿರತಕ್ಕದ್ದು (ಅಂಗೀರಸ). ಜಾತಿಯನ್ನು ಆಧಾರವಾಗಿಟ್ಟುಕೊಂಡು ವಿಧಿಸುವ ಶಿಕ್ಷಾ ಪ್ರಮಾಣದಲ್ಲಿ ತರತಮ ಮಾಡಿದ್ದನ್ನು ಶಾಸ್ತ್ರಗ್ರಂಥಗಳಲ್ಲಿ ಕಾಣಬಹುದು.

	ಮೊಗಲ್ ಸಾಮ್ರಾಜ್ಯದಲ್ಲಿ ಜಾರಿಯಾದ ಇಸ್ಲಾಮೀ ಅಪರಾಧಿಕ ಕಾನೂನಿನಲ್ಲಿ ನಾಲ್ಕು ರೀತಿ ಶಿಕ್ಷೆಗಳನ್ನು ಅಳವಡಿಸಲಾಗಿತ್ತು: ಕಿಸಾ, ದಿಯಾ, ಹದ್ದ್ ಮತ್ತು ತಜೀರ್. ಕಿಸಾ ಎಂದರೆ ಪ್ರತೀಕಾರದ ತತ್ತ್ವ. ಉದ್ದೇಶಪೂರಿತ ಕೊಲೆ ಮತ್ತು ದೇಹಾಘಾತಗಳಿಗೆ ಇದು ಪ್ರಾಣಕ್ಕೆ ಪ್ರಾಣ, ಅಂಗಕ್ಕೆ ಅಂಗ ಎಂಬ ಆಧಾರದಲ್ಲಿ ಅಪರಾಧಿಗೆ ಸೂಕ್ತ ಶಿಕ್ಷೆ ವಿಧಿಸುತ್ತದೆ. ದಿಯಾ ಅಂದರೆ ರಕ್ತ ಮೌಲ್ಯ. ಇದರ ಪ್ರಕಾರ ಅಪರಾಧದಿಂದ ಸಂತ್ರಸ್ತನಾದ ವ್ಯಕ್ತಿಯು ಅಪರಾಧಿಯ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳುವ ಬದಲು ಅಪರಾಧಿಯಿಂದ ಪರಿಹಾರಧನ ಪಡೆದುಕೊಳ್ಳುವ ಆಯ್ಕೆಯನ್ನು ಮಾಡಬಹುದು. ಹದ್ದ್ ಶಿಕ್ಷೆಯನ್ನು ಧರ್ಮ ವಿರೋಧಿ ಅಥವಾ ಸಮಾಜ ವಿರೋಧಿ ಅಪರಾಧಗಳಿಗಾಗಿ ನಿಗದಿತ ಪ್ರಮಾಣದಲ್ಲಿ ನೀಡಲಾಗುತ್ತಿತ್ತು: ಧರ್ಮ ಪರಿತ್ಯಾಗಕ್ಕೆ ಮರಣದಂಡನೆ, ವ್ಯಭಿಚಾರಕ್ಕೆ ಕಲ್ಲಿನಿಂದ ಹೊಡೆದು ಸಾಯಿಸುವುದು, ಕುಡಿತಕ್ಕೆ 80 ಚಡಿಯೇಟು, ಕಳ್ಳತನಕ್ಕೆ ಬಲಗೈ ಕಡಿಯುವುದು, ಹೆದ್ದಾರಿ ದರೋಡೆಗೆ ಎರಡೂ ಕೈ ಮತ್ತು ಕಾಲುಗಳನ್ನು ತುಂಡರಿಸುವುದು, ಕೊಲೆಸಹಿತ ದರೋಡೆಗೆ ಖಡ್ಗದ ಮೂಲಕ ಸಾವು ಇತ್ಯಾದಿ. ತಜೀರ್ ಶಿಕ್ಷೆ ಸೆರೆಮೆನೆ ವಾಸ, ದೈಹಿಕ ಶಿಕ್ಷೆ, ಗಡಿಪಾರು ಮತ್ತು ತೇಜೋವಧೆ ರೂಪಗಳನ್ನು ಹೊಂದಿದ್ದು, ನ್ಯಾಯಾಧೀಶನ ವಿವೇಚನೆಯಂತಿರುತ್ತಿತ್ತು.

	ಈಸ್ಟ್ ಇಂಡಿಯ ಕಂಪೆನಿಯ ಆಳಿಕೆ ಸ್ಥಳೀಯವಾಗಿ ಪ್ರಚಲಿತವಿದ್ದ ಕಾನೂನನ್ನು ಕನಿಷ್ಠ ಬದಲಾವಣೆಯೊಂದಿಗೆ ಮುಂದುವರಿಸುವ ಧೋರಣೆ ಹೊಂದಿತ್ತು. ಆದರೆ ಶಿಕ್ಷಾ ಪದ್ಧತಿಯಲ್ಲಿದ್ದ ಕ್ರೂರ ಕಟ್ಟಳೆಗಳನ್ನು ಕೊನೆಗಾಣಿಸುವ ಕ್ರಮ ಕೈಗೊಳ್ಳಲಾಯಿತು. ಲಾರ್ಡ್ ಕಾರ್ನ್‍ವಾಲೀಸ್ ಮರಣದಂಡನೆಯನ್ನು ಉದ್ದೇಶಪೂರ್ವಕ ಕೊಲೆಗೆ ಮಾತ್ರ ಸೀಮಿತ ಗೊಳಿಸಿದ. ಕೊಲೆಗೀಡಾದ ವ್ಯಕ್ತಿಯ ಕುಟುಂಬದವರು ಮರಣದಂಡನೆಯ ಬದಲು ಇತರ ಪರಿಹಾರದ ಆಯ್ಕೆ ಮಾಡುವುದನ್ನು ನಿಲ್ಲಿಸಿದ. ಅಂಗ ವಿಚ್ಛೇದನ ಶಿಕ್ಷೆ ರದ್ದುಗೊಳಿಸಿದ. 1797ರ ರೆಗ್ಯುಲೇಷನ್ ಕಾಯಿದೆಯಂತೆ ದಿಯಾ ಶಿಕ್ಷೆಗೊಳಗಾಗಿ ದಂಡತೆರಲು ಅಸಮರ್ಥರಾದವರನ್ನು ಅನಿರ್ದಿಷ್ಟ ಕಾಲ ಸೆರೆಮನೆಯಲ್ಲಿಡುವುದನ್ನು ತಪ್ಪಿಸಿ ನಿರ್ದಿಷ್ಟ ಅವಧಿಯ ಶಿಕ್ಷೆಗೆ ಗುರಿಪಡಿಸಲಾಯಿತು. 1803ರಲ್ಲಿ ತಜೀರ್ ಶಿಕ್ಷೆಗೆ ಸುಧಾರಣೆ ತಂದು ಸಾಮಾನ್ಯ ದರೋಡೆಗೆ 7 ವರ್ಷ ಸೆರೆಮನೆವಾಸ ಮತ್ತು ಹಿಂಸಾಪೂರಿತ ದರೋಡೆಗೆ ಜೀವಾವಧಿ ಶಿಕ್ಷೆ, ಗಡಿಪಾರು ಹಾಗೂ ಮರಣದಂಡನೆ ನಿರೂಪಿಸಲಾಯಿತು. 1833ರಲ್ಲಿ ಅಸ್ತಿತ್ವಕ್ಕೆ ಬಂದ ಭಾರತದ ಕೇಂದ್ರ ಶಾಸನ ಸಭೆ ಡಕಾಯಿತರಿಗೆ ಗಡಿಪಾರು ಅಥವಾ ಕಠಿಣಕ್ರಮದ ಜೈಲುವಾಸ ಶಿಕ್ಷೆಯನ್ನು ಹಾಗೂ ಠಕ್ಕರಿಗೆ ಜೀವಾವಧಿ ಕಠಿಣಕ್ರಮದ ಶಿಕ್ಷೆಯನ್ನು ವಿಧಿಸುವ ಕಾನೂನು ಮಾಡಿತು. ಬನಾರಸ್, ಮದ್ರಾಸು ಮತ್ತು ಬೊಂಬಾಯಿ ಪ್ರಾಂತಗಳಲ್ಲಿ ಮತ ಆಧಾರಿತ ಅಪರಾಧಿಕ ಕಾನೂನು ಸರಕಾರ ಮಾಡಿದ ಬದಲಾವಣೆಗಳೊಂದಿಗೆ ಶಿಕ್ಷಾವಿಧಿ ನಿರೂಪಿಸಿದ್ದುವು.

	ರಾಷ್ಟ್ರಮಟ್ಟದಲ್ಲಿ ಏಕರೂಪದ ದಂಡನೀತಿ ರಚಿಸುವ ಉದ್ದೇಶಕ್ಕಾಗಿ ಲಾರ್ಡ್ ಮೆಕಾಲೆ ಮಾರ್ಗದರ್ಶನದಲ್ಲಿ ಪ್ರಥಮ ಕೇಂದ್ರ ಕಾನೂನು ಆಯೋಗವನ್ನು ರಚಿಸಲಾಯಿತು. ಇದರ ಫಲವಾಗಿ 1860 ಭಾರತೀಯ ದಂಡ ಸಂಹಿತೆ ರಚಿತವಾಗಿ 1862ರಲ್ಲಿ ಜಾರಿಗೆ ಬಂತು. ಇಂಗ್ಲಿಷ್ ಅಪರಾಧಿಕ ಕಾನೂನು, ಫ್ರೆಂಚ್ ದಂಡ ಸಂಹಿತೆ, ಲೂಸಿಯಾನ ಸಂಹಿತೆ, ಮುಸ್ಲಿಮ್ ಮತ್ತು ಹಿಂದು ಕಾನೂನುಗಳ ಮೂಲ ತತ್ತ್ವಗಳಿಂದ ಪ್ರೇರಣೆ ಪಡೆದು ಮೆಕಾಲೆಯ ಪಾಂಡಿತ್ಯ, ಕೌಶಲ್ಯ ಮತ್ತು ಶ್ರಮಗಳಿಂದ ಅಚ್ಚುಕಟ್ಟಾಗಿ ಸಿದ್ಧಗೊಂಡ ಕಾನೂನಾಗಿ ಭಾರತೀಯ ದಂಡ ಸಂಹಿತೆ ಮೂಡಿಬಂದಿದೆ. ಅಪರಾಧದ ಪ್ರಮಾಣಾನುಸಾರ ಶಿಕ್ಷೆ ವಿಧಿಸುವ ಧೋರಣೆ ಇಲ್ಲಿ ಸ್ಪಷ್ಟ. ಇದು ಇಂದಿಗೂ ಪ್ರಚಲಿತವಿರುವ ಕಾನೂನು.

	ಇಂದಿನ ಸ್ಥಿತಿಗತಿ: ಭಾರತೀಯ ದಂಡ ಸಂಹಿತೆಯಲ್ಲಿ ನಿಗದಿಪಡಿಸ ಲಾದ ಶಿಕ್ಷೆಗಳ ವಿಧಗಳು (ಆಧ್ಯಾಯ III) ಯಾವುದೆಂದರೆ: ಮರಣ ದಂಡನೆ, ಜೀವಾವಧಿ ಕಾರಾಗೃಹವಾಸ (ಸೆರೆಮನೆವಾಸ), ಕಠಿಣ ಪರಿಶ್ರಮದ ಸೆರೆಮನೆ ವಾಸ, ಏಕಾಂತವಾಸದ ಸೆರೆಮನೆ, ಸಾಮಾನ್ಯ ಸೆರೆಮನೆವಾಸ, ಆಸ್ತಿ ಮುಟ್ಟುಗೋಲು ಹಾಕುವುದು ಮತ್ತು ದಂಡಶುಲ್ಕ ವಿಧಿಸುವುದು. ಮೊದಲು ಜಾರಿಯಲ್ಲಿದ್ದ ಚಡಿಯೇಟಿನ ಶಿಕ್ಷೆ 1949ರಲ್ಲಿ ರದ್ದಾಯಿತು. ಗಡಿಪಾರು ಶಿಕ್ಷೆ 1955ರಲ್ಲಿ ರದ್ದಾಗಿ ಇದರ ಬದಲು ಜೀವಾವಧಿ ಶಿಕ್ಷೆ ಅಳವಡಿಸಲಾಗಿದೆ. ಸಂಬಂಧಿಸಿದ ಸರ್ಕಾರ (ಕೇಂದ್ರ ಅಥವಾ ರಾಜ್ಯ) ಯಾವುದೇ ಪ್ರಕರಣಗಳಲ್ಲಿ ಮರಣದಂಡನೆಯ ಬದಲು ಜೀವಾವಧಿ ಸೆರೆಮನೆ ವಾಸವನ್ನು ವಿಧಿಸಬಹುದು. ಹಾಗೆಯೇ ಜೀವಾವಧಿ ಕಾರಾಗೃಹದ ಬದಲು 14 ವರ್ಷಕ್ಕೆ ಮೀರದ ಸೆರೆಮನೆ ವಾಸ ವಿಧಿಸ ಬಹುದು. ಜೀವಾವಧಿ ಸೆರೆಮನೆ ವಾಸದ ಸಾಮಾನ್ಯ ಅರ್ಥವೆಂದರೆ ಅನಿರ್ದಿಷ್ಟ ಕಾಲದ ಸೆರೆಮನೆ ವಾಸ. ಸಾಮಾನ್ಯ ಅಥವಾ ಕಠಿಣ ಪರಿಶ್ರಮದ ಸೆರೆಮೆನೆ ವಾಸ ಶಿಕ್ಷೆಯನ್ನು ಒಂದೇ ಶಿಕ್ಷೆಯ ವಿವಿಧ ಅವಧಿಗಳಲ್ಲಿ ನೀಡಬಹುದು. ದಂಡಶುಲ್ಕದ ಪ್ರಮಾಣವನ್ನು ದಂಡಸಂಹಿತೆ ಯಲ್ಲಿ ನಿಗದಿಪಡಿಸಲಾಗಿದೆ. ಒಂದು ವೇಳೆ ಹಾಗೆ ನಿಗದಿಪಡಿಸಿರದ ಸಂದರ್ಭಗಳಲ್ಲಿ ಅದು ಮಿತಿ ಮೀರಿದ ದಂಡಶುಲ್ಕವಾಗಬಾರದು. ದಂಡಶುಲ್ಕ ಶಿಕ್ಷೆಯನ್ನು ಸೆರೆಮನೆವಾಸದ ಶಿಕ್ಷೆಯೊಂದಿಗೆ ವಿಧಿಸಬಹುದು ಅಥವಾ ದಂಡಶುಲ್ಕದ ಶಿಕ್ಷೆಯನ್ನು ಮಾತ್ರ ವಿಧಿಸಬಹುದು. ದಂಡಶುಲ್ಕ ಪಾವತಿ ಮಾಡದಿರುವ ತಪ್ಪಿಗೆ ಸೆರೆಮನೆವಾಸ ವಿಧಿಸುವಾಗ ಆ ಶಿಕ್ಷೆಗೆ ಸೆರೆಮನೆವಾಸದ ಗರಿಷ್ಟ ಶಿಕ್ಷೆ ಏನಿದೆಯೋ ಅದರ ನಾಲ್ಕನೆಯ ಒಂದಂಶಕ್ಕೆ ಮೀರದಂತೆ ಸೆರೆಮನೆವಾಸ ಶಿಕ್ಷೆಯನ್ನು ನೀಡಬಹುದು. ಒಂದು ಅಪರಾಧ ಹಲವು ಭಾಗಗಳಿಂದ ಕೂಡಿದ್ದು, ಯಾವುದಾದರೂ ಒಂದು ಭಾಗ ಅಪರಾಧವಾದಾಗ ಅಪರಾಧಿಗೆ ಒಂದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ವಿಧಿಸಬಾರದು. ಒಂದು ಕೃತ್ಯ ಒಂದಕ್ಕಿಂತ ಹೆಚ್ಚು ಅಪರಾಧ ವ್ಯಾಖ್ಯೆಗಳಡಿಯಲ್ಲಿ ಬಂದಾಗ ಅಥವಾ ಹಲವು ಕೃತ್ಯಗಳಲ್ಲಿ ಕೆಲವು ಅಪರಾಧಗಳಾಗಿದ್ದು ಇತರ ಕೃತ್ಯಗಳ ಜೊತೆ ಸೇರಿ ಇನ್ನೊಂದು ಅಪರಾಧದ ವ್ಯಾಖ್ಯೆಯಡಿಯಲ್ಲಿ ಬಂದಾಗ ವಿಧಿಸುವ ಶಿಕ್ಷೆ ಒಂದು ಅಪರಾಧಕ್ಕೆ ನೀಡುವ ಗರಿಷ್ಟ ಶಿಕ್ಷೆಗಿಂತ ಅಧಿಕವಿರಬಾರದು.

	ನ್ಯಾಯಾಲಯ ಸೆರೆಮನೆವಾಸದ ಶಿಕ್ಷೆ ನೀಡುವಾಗ ಏಕಾಂತವಾಸದ ಶಿಕ್ಷೆಯನ್ನು ಕೂಡಾ ಕೆಲವು ಮಿತಿಗಳಿಗೆ ಒಳಪಟ್ಟು ನೀಡಬಹುದು. ಅಂತಹ ಏಕಾಂತವಾಸದ ಶಿಕ್ಷೆ ಒಂದೇ ಸುತ್ತಿನಲ್ಲಿ 14 ದಿನಗಳಿಗಿಂತ ಅಧಿಕವಿರಬಾರದು. ಸೆರಮನೆವಾಸದ ಶಿಕ್ಷೆ ಕ್ರಮವಾಗಿ 3 ತಿಂಗಳೊಳಗೆ, 3-6 ತಿಂಗಳು, 6 ತಿಂಗಳಿಂದ 1ವರ್ಷ ಮತ್ತು 1 ವರ್ಷಕ್ಕೆ ಮೀರಿದ ಅವಧಿಯದ್ದಾಗಿದ್ದರೆ ಕ್ರಮವಾಗಿ 7 ದಿನ, 1 ತಿಂಗಳು, 2 ತಿಂಗಳು ಮತ್ತು 3 ತಿಂಗಳುಗಳ ಏಕಾಂತವಾಸದ ಶಿಕ್ಷೆ ವಿಧಿಸಬಹುದು. ಆದರೆ ಈ ಶಿಕ್ಷೆಗಳನ್ನು ನ್ಯಾಯಾಲಯಗಳು ಅತ್ಯಪರೂಪದ ಸಂದರ್ಭಗಳಲ್ಲಿ ಮಾತ್ರ ವಿಧಿಸಬೇಕೆಂದು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳಲ್ಲಿ ಹೇಳಲಾಗಿದೆ.

	ಮರಣದಂಡನೆಯನ್ನು ಒಂದು ಶಿಕ್ಷೆಯನ್ನಾಗಿ ಆಧುನಿಕ ನಾಗರಿಕ ಸಮಾಜ ಮುಂದುವರಿಸಬೇಕೇ ಬೇಡವೇ ಎನ್ನುವ ವಿವಾದವನ್ನು ಸರ್ವೋಚ್ಚ ನ್ಯಾಯಾಲಯ ಮತ್ತು ಕಾನೂನು ಆಯೋಗಗಳು ಹಲವಾರು ಬಾರಿ ಪರಿಗಣಿಸಿವೆ. ಈ ಪ್ರಶ್ನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ವಿವಿಧ ದೇಶೀ ನ್ಯಾಯಪದ್ಧತಿಗಳಲ್ಲಿ ಕೂಡಾ ಎದ್ದಿದೆ. ಈ ನಿಟ್ಟಿನಲ್ಲಿ ಮಾನವ ಹಕ್ಕು ಮತ್ತು ಸಾಮಾನ್ಯ ನ್ಯಾಯ ಕುರಿತಾದ ಚಿಂತನೆ ಅಗಾಧ ಪರಿಣಾಮ ಬೀರಿದ್ದನ್ನು ಕಳೆದ 5 ದಶಕದಲ್ಲಿ ಕಾಣಬಹುದು. ಜರ್ಮನಿ (1949), ಇಂಗ್ಲೆಂಡ್ (1965) ಹಾಗೂ ಕೆನಡ (1960) ಗಳಲ್ಲೂ ಈ ಶಿಕ್ಷೆಯನ್ನು ಕೈಬಿಡಲಾಗಿದೆ. ಅಮೆರಿಕ ಸಂವಿಧಾನದಲ್ಲಿ ಕ್ರೂರ ಮತ್ತು ಅಸಾಧಾರಣ ಶಿಕ್ಷೆಯ ವಿರುದ್ಧ ಕೊಡಲಾದ ರಕ್ಷಣೆಯನ್ನು ವ್ಯಾಖ್ಯಾನಿಸುತ್ತ ಅಮೆರಿಕ ಸರ್ವೋಚ್ಚ ನ್ಯಾಯಾಲಯ ಮರಣದಂಡನೆ ನೀಡುವ ಕಾನೂನಿನ ಪ್ರಕ್ರಿಯೆಯಲ್ಲಿ ರಕ್ಷಣಾತ್ಮಕ ಕ್ರಮಗಳಿರಬೇಕೆಂದೂ ನ್ಯಾಯಾಧೀಶ ತನ್ನ ವಿವೇಚನಾಧಿಕಾರವನ್ನು ವಸ್ತು ನಿಷ್ಠವಾಗಿ ಮತ್ತು ಎಲ್ಲ ಸಾಧಕ ಬಾಧಕಗಳನ್ನು ಪರಿಶೀಲಿಸಿ ಚಲಾಯಿಸತಕ್ಕದ್ದೆಂದೂ ಘೋರವಲ್ಲದ ಅಪರಾಧಗಳಿಗೆ ಮರಣ ದಂಡನೆ ಸಲ್ಲದೆಂದೂ ಹೇಳಿದೆ.

	ಮರಣ ದಂಡನೆ ವಿರುದ್ಧ ಇರುವ ವಾದಗಳು ಹೀಗಿವೆ: ಇದು ಅಪರಾಧಿಯ ಸುಧಾರಣೆಗೆ ಅವಕಾಶ ಕೊಡುವುದಿಲ್ಲ; ತಪ್ಪಾಗಿ ನೀಡಬಹುದಾದ ಶಿಕ್ಷೆಯನ್ನು ಸರಿಪಡಿಸಲು ಆಸ್ಪದವಿಲ್ಲ; ಮಾನವ ಜೀವ ಅಮೂಲ್ಯವಾದ್ದರಿಂದ ಅದರ ಹಾನಿ ತರವಲ್ಲ; ಧಾರ್ಮಿಕ ಮತ್ತು ನೈತಿಕ ತತ್ತ್ವಗಳು ಇದಕ್ಕೆ ಸಮ್ಮತಿಸುವುದಿಲ್ಲ; ಮರಣದಂಡನೆ ಭಯ ಅಪರಾಧ ಪ್ರವೃತ್ತಿಯವರನ್ನು ವಿಮನಸ್ಕಗೊಳಿಸುವುದಿಲ್ಲ ಇತ್ಯಾದಿ. ಮರಣದಂಡನೆ ಪರ ವಾದಗಳು ಹೀಗಿವೆ : ಮರಣದಂಡನೆ ಅಪರಾಧಿ ಪ್ರವೃತ್ತಿಗೆ ಕಡಿವಾಣ ಹಾಕುತ್ತದೆ; ಸಾಮಾಜಿಕ ಖಂಡನೆಯನ್ನು ಪ್ರತಿಧ್ವನಿಸುತ್ತದೆ; ಭಯೋತ್ಪಾದಕರನ್ನು ನಿರ್ಮೂಲನ ಮಾಡಲು ಸಹಾಯ ಮಾಡುತ್ತದೆ; ಸರಣಿಕೊಲೆಗಳಂಥ ಅತ್ಯಂತ ಹೀನ ಪಾತಕಿಗಳನ್ನು ನಿರ್ಮೂಲನ ಮಾಡುವ ಮೂಲಕ ಸಮಾಜದ ಕ್ಷೇಮಪಾಲನೆಯನ್ನು ಮಾಡುತ್ತದೆ ಇತ್ಯಾದಿ. ಭಾರತದ ಕಾನೂನು ಆಯೋಗ ಈ ಎಲ್ಲ ವಿಚಾರಗಳನ್ನು ಗಮನಿಸಿ ಮರಣದಂಡನೆಯನ್ನು ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ವಿಧಿಸಲು ಶಿಫಾರಸು ಮಾಡಿದೆ. ಭಾರತದ ಸಂಸತ್ತು 1949, 1958, 1961 ಮತ್ತು 1978ರಲ್ಲಿ ಮರಣದಂಡನೆಯನ್ನು ರದ್ದುಗೊಳಿಸುವ ಮಸೂದೆಗಳನ್ನು ಪದೇ ಪದೇ ತಿರಸ್ಕರಿಸಿದೆ. 1973ರ ಅಪರಾಧ ದಂಡನಾ ಪ್ರಕ್ರಿಯಾ ಸಂಹಿತೆಯಲ್ಲಿ ಅಪರಾಧಿಗೆ ಮರಣದಂಡನೆ ವಿಧಿಸುವ ಮೊದಲು ಶಿಕ್ಷೆ ಕುರಿತಾಗಿ ಅಹವಾಲು ಕೇಳಿಕೆಯ ಅವಕಾಶ ಕೊಡಬೇಕೆಂದೂ ಉಚ್ಚನ್ಯಾಯಾಲಯದ ಸಮ್ಮತಿ ಮರಣದಂಡನೆಗೆ ಆವಶ್ಯಕವೆಂದೂ ಪ್ರಾವಿಧಾನಿಸುತ್ತಾ ರಕ್ಷಣಾ ಕ್ರಮಗಳನ್ನು ಸೇರಿಸಿದೆ. 1980ರಲ್ಲಿ ಬಚನ್‍ಸಿಂಗ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಕೂಲಂಕಷ ಚರ್ಚಿಸಿ ಮರಣದಂಡನೆಯ ಸಂವಿಧಾನ ಬದ್ಧತೆಯನ್ನು ಎತ್ತಿ ಹಿಡಿಯುತ್ತ ಇದನ್ನು ಅಪರೂಪದಲ್ಲಿ, ಅತಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ವಿಧಿಸಬೇಕೆಂದೂ ಶಿಕ್ಷೆ ವಿಧಿಸುವ ನ್ಯಾಯಾಧೀಶ ಎಲ್ಲ ವಿಚಾರಗಳನ್ನು (ಅಂದರೆ ಸಹಾನುಭೂತಿಕಾರಕವಾದ ಹಾಗೂ ಗಂಭೀರವಾದ ಅಂಶಗಳನ್ನು) ಪರಿಗಣಿಸಿ ಮರಣದಂಡನೆ ವಿಧಿಸ ಬೇಕೆಂದೂ ಹೇಳಿದೆ. ಯಾವುದು ಅತ್ಯಪರೂಪದ ಪ್ರಕರಣವೆಂದು ತೀರ್ಮಾನಿಸಲು ಕೊಲೆ ಮಾಡಿದ ರೀತಿ, ಉದ್ದೇಶ, ಪ್ರಮಾಣ (ಸರಣಿ ಕೊಲೆಗಳು), ಬಲಿಯಾದವನ ವ್ಯಕ್ತಿತ್ತ್ವ (ದೇಶದ ನಾಯಕರು, ಸ್ತ್ರೀಯರು ಮತ್ತು ಮಕ್ಕಳು ಇತ್ಯಾದಿ) ಮತ್ತು ಕೊಲೆಯ ಸಮಾಜ ವಿರೋಧಿ ಸ್ವರೂಪಗಳನ್ನು (ವಧು ದಹನ ಇತ್ಯಾದಿ) ತೆಗೆದುಕೊಳ್ಳಬೇಕೆಂದು ಮಚಿಸಿಂಗ್ ಪ್ರಕರಣದಲ್ಲಿ (1983) ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಸೆರೆಮನೆವಾಸದಲ್ಲಿದ್ದಾಗ ಮಾಡಿದ ಕೊಲೆಗೆ ಕಡ್ಡಾಯ ಮರಣದಂಡನೆ ವಿಧಿಸುವ ಪ್ರಾವಿಧಾನ ಸಂವಿಧಾನಬಾಹಿರವೆಂದು ಹೇಳಿ ಅನೂರ್ಜಿತಗೊಳಿ ಸಲಾಗಿದೆ (ಮಿತುಸಿಂಗ್ ಪ್ರಕರಣ, 1983). ಪ್ರಧಾನ ಮಂತ್ರಿ ಇಂದಿರಾಗಾಂಧಿ ಮತ್ತು ರಾಜೀವ್‍ಗಾಂಧಿ ಹತ್ಯೆ ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲಾಯಿತು. 2004ರ ಧನಂಜಯ ಚಟರ್ಜಿ ಪ್ರಕರಣ ಮತ್ತು ವೀರಪ್ಪನ್ ಸಹಚರರ ಪ್ರಕರಣಗಳಲ್ಲಿ ಮರಣ ದಂಡನೆ ವಿಧಿಸಲಾಯಿತು. ಭಾರತೀಯ ದಂಡಸಂಹಿತೆಯಲ್ಲಿ ಮರಣದಂಡನೆಯನ್ನು ಸರ್ಕಾರದ ವಿರುದ್ಧ ಯುದ್ಧಸಾರುವುದು, ದಂಗೆ, ಕೊಲೆ, ಆತ್ಮಹತ್ಯೆಗೆ ಪ್ರೋತ್ಸಾಹ ಅಥವಾ ಸಹಾಯ, ಡಕಾಯಿತಿ ಸಹಿತ ಕೊಲೆ - ಇಂತಹ ಅಪರಾಧಗಳಿಗೆ ಸೀಮಿತಗೊಳಿಸಲಾಗಿದೆ. ಭಾರತೀಯ ಸಂವಿಧಾನದಲ್ಲಿ ರಾಷ್ಟ್ರಪತಿಗೆ ಮತ್ತು ರಾಜ್ಯಪಾಲರುಗಳಿಗೆ ಶಿಕ್ಷೆಗಳ ಕುರಿತಾಗಿ ಕ್ಷಮಾದಾನ ನೀಡುವ, ಶಿಕ್ಷೆಯ ಗಾತ್ರವನ್ನು ತಗ್ಗಿಸುವ ಅಧಿಕಾರವಿದೆ. ಈ ಅಧಿಕಾರವನ್ನು ಸುವಿವೇಚನೆಯಿಂದ ಚಲಾಯಿಸಬೇಕೆಂದು ನ್ಯಾಯಾಲಯಗಳು ಹೇಳಿವೆ.

	1980 ಮತ್ತು 1990ರ ದಶಕದಲ್ಲಿ ಸಂವಿಧಾನದ ಪರಿಚ್ಛೇದ 21ಕ್ಕೆ ಸಂಬಂಧಿಸಿದಂತೆ ಆದ ನ್ಯಾಯಿಕ ಬೆಳೆವಣಿಗೆಯಲ್ಲಿ ಶಿಕ್ಷಾ ಪದ್ಧತಿಯ ಕುರಿತು ಮಹತ್ತರ ಬದಲಾವಣೆಗಳಾದುವು. ಶಿಕ್ಷೆಯ ಪ್ರಮಾಣ ಅಪರಾಧದ ಗಾತ್ರಕ್ಕೆ ಸಾಪೇಕ್ಷವಾಗಿರಬೇಕೆಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ರಣಜಿತ್ ಠಾಕೂರ್ ಪ್ರಕರಣದಲ್ಲಿ ನ್ಯಾಯಮೂರ್ತಿ ವೆಂಕಟಾಚಲಯ್ಯ ನವರು, “ಶಿಕ್ಷೆ ಅಪರಾಧಕ್ಕೆ ಮತ್ತು ಅಪರಾಧಿಗೆ ತಕ್ಕುದಾಗಿರಬೇಕು. ಅದು ಪ್ರತೀಕಾರಾತ್ಮಕ ಅಥವಾ ಅತಿಕ್ರೂರವಾಗಿರಬಾರದು. ಅದು ಅಂತಸ್ಸಾಕ್ಷಿಯನ್ನು ಕಲಕುವಂಥ ಅಥವಾ ಪೂರ್ವಗ್ರಹವನ್ನು ಸಾಕ್ಷೀಕರಿಸುವಂತಹ ಅನುಪಾತ ರಾಹಿತ್ಯವುಳ್ಳದ್ದಾಗಿರಬಾರದು” ಎಂದು ಹೇಳಿದ್ದಾರೆ. ಅಪರಾಧಿ ಶಿಕ್ಷೆ ಅನುಭವಿಸುವ ಸೆರೆಮನೆ ಸ್ಥಿತಿ ಮಾನವೀಯ ಅಂಶಗಳನ್ನು ಹೊಂದಿರಬೇಕು; ಖೈದಿಗೆ ಸೀಮಿತ ಮಟ್ಟದಲ್ಲಿಯಾದರೂ ಸಮಾಜದೊಂದಿಗೆ ಬೆರೆಯುವ ಹಕ್ಕಿರಬೇಕು; ಬಾಲಾಪರಾಧಿಗಳಿಗೆ ಪ್ರತ್ಯೇಕ ಬಂದೀಖಾನೆ ಮತ್ತು ಪುನರ್ವಸತಿ ಕಲ್ಪಿಸಲು ಸವಲತ್ತುಗಳಿರ ಬೇಕು, ಮಹಿಳಾ ಖೈದಿಗಳಿಗೆ ಪುರುಷರಿಂದ ಪ್ರತ್ಯೇಕವಿರುವ ಸವಲತ್ತುಗಳಿರಬೇಕು.

	ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಘೋಷಣೆ ಮತ್ತು ಒಪ್ಪಂದಗಳು ದೇಶೀ ಶಿಕ್ಷಾಪದ್ಧತಿಗಳ ಮೇಲೆ ಪರಿಣಾಮ ಬೀರಿವೆ. ಇವುಗಳಲ್ಲಿ ಉಲ್ಲೇಖನೀಯವಾದುದು 1984ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲ್ಪಟ್ಟು 1987ರಲ್ಲಿ ಜಾರಿಗೆ ಬಂದ ಹಿಂಸೆ, ಕ್ರೂರ, ಅಮಾನವೀಯ ಅಥವಾ ಹೀನೈಸುವ ನಡವಳಿಕೆ ಅಥವಾ ಶಿಕ್ಷೆಯನ್ನು ವಿರೋಧಿಸುವ ಒಪ್ಪಂದ ಯಾರೊಬ್ಬನನ್ನೂ ಈ ರೀತಿಯ ಶಿಕ್ಷೆ ಅಥವಾ ನಡವಳಿಕೆಗೆ ಗುರಿಪಡಿಸಬಾರದೆಂಬುದೇ ಇದರ ಮೂಲಧೋರಣೆ. ಸಹಿಹಾಕಿದ ಎಲ್ಲ ರಾಷ್ಟ್ರಗಳು ಪರಿಣಾಮಕಾರಿ ಯಾದ ಶಾಸನಾತ್ಮಕ, ಆಡಳಿತಾತ್ಮಕ, ನ್ಯಾಯಿಕ ಮತ್ತು ಇತರ ಕ್ರಮಗಳನ್ನು ಕೈಗೊಂಡು ತಮ್ಮ ಕ್ಷೇತ್ರದಲ್ಲಿ ಶಿಕ್ಷೆಯಲ್ಲಿನ ಹಿಂಸೆಯನ್ನು ನಿವಾರಿಸಬೇಕೆಂದು ಹೇಳಲಾಗಿದೆ. ಹಿಂಸೆಗೊಳಗಾದ ವ್ಯಕ್ತಿಗಳಿಗೆ ಪರಿಹಾರಧನ ಮತ್ತು ಪುನರ್ವಸತಿ ಸೌಲಭ್ಯ ಕಲ್ಪಿಸಲು ನಿರ್ದೇಶಿಸಲಾಗಿದೆ. ಒಪ್ಪಂದದ ಅನುಷ್ಠಾನಕ್ಕೆ ಹಿಂಸೆಯ ವಿರುದ್ಧ ಸಮಿತಿ ರಚಿಸಲಾಗಿದೆ. ಭಾರತದಲ್ಲಿ ಲಾಕಪ್ ಮರಣಗಳ ಸಂದರ್ಭದಲ್ಲಿ ಈ ಒಪ್ಪಂದದ ಆಧಾರದಲ್ಲಿ ಪರಿಹಾರ ಕೊಟ್ಟ ಪ್ರಕರಣಗಳಿವೆ. ಈ ಒಪ್ಪಂದದ ಪರಿಣಾಮ ಹಲವಾರು ರಾಷ್ಟ್ರಗಳ ಶಿಕ್ಷಾ ಪದ್ಧತಿಯ ಮೇಲೆ ಗಾಢವಾಗಿರುವುದನ್ನು ಗಮನಿಸಬಹುದು. ಚಡಿಯೇಟಿನ ಶಿಕ್ಷೆಯನ್ನು ಶ್ರೀಲಂಕಾ, ಮಲೇಷ್ಯ, ಜಿಂಬಾಬ್ವೆ, ಕೀನ್ಯ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಈ ಮೊದಲು ವ್ಯಾಪಕವಾಗಿ ಬಳಸುತ್ತಿದ್ದು ಈಗ ಸೀಮಿತ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತಿದೆ.

	ಒಟ್ಟಿನಲ್ಲಿ ಮಾನವ ಹಕ್ಕುಗಳ ಮೇಲಿನ ಗೌರವ, ಸಾಂಸ್ಕøತಿಕ ಉನ್ನತೀಕರಣ ಮತ್ತು ಪ್ರಜಾಪ್ರಭುತ್ವದ ಪ್ರಬುದ್ಧತೆಗಳು ಶಿಕ್ಷಾಪದ್ಧತಿ ಯನ್ನೂ ನ್ಯಾಯದ ಯೋಗ್ಯ ಉಪಕರಣವನ್ನಾಗಿ ಮಾಡಿದುದು ಮಹತ್ತರ ಬೆಳೆವಣಿಗೆ.			
	(ಪಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ